ಮೆಕ್‍ಡೂಗಲ್, ವಿಲಿಯಮ್
1871-1938 ಮನಶ್ಯಾಸ್ತ್ರಜ್ಞ ಉದ್ದಿಷ್ಟ ವರ್ತನಾವಾದಿ. ಹುಟ್ಟಿದ್ದು ಇಂಗ್ಲೆಂಡಿನ ಲಾಂಕ್‍ಷೈರ್‍ನಲ್ಲಿ. ಕೇಂಬ್ರಿಜ್ ವಿಶ್ವ ವಿದ್ಯಾಲಯದಲ್ಲಿ ವೈದ್ಯಶಿಕ್ಷಣ ಪಡೆದು ಅನಂತರ ಗಟಿಂಗೆನ್‍ಗೆ ತೆರಳಿ ಅಲ್ಲಿ ಜಿ. ಇ. ಮಲ್ಲರ್ ಬಳಿ ವಿದ್ಯಾರ್ಥಿಯಾಗಿದ್ದು ಇಂಗ್ಲೆಂಡಿಗೆ ಹಿಂತಿರುಗಿದ. 1898-99ರಲ್ಲಿ ಕೇಂಬ್ರಿಜ್ ಮಾನವವಿಜ್ಞಾನ ಪ್ರವಾಸದಲ್ಲಿ ಭಾಗವಹಿಸಿ ಬೋರ್ನಿಯೋದಲ್ಲಿ ಸ್ವತಂತ್ರವಾಗಿ ಅಧ್ಯಯನ ನಡೆಸಿದ. 1904-20ರ ತನಕ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಮಾನವತತ್ತ್ವಶಾಸ್ತ್ರದ ವೈಲ್ಡ್ ಉಪನ್ಯಾಸಕನಾಗಿ ನಿಯಮಿತನಾಗಿದ್ದ. ಈ ಅವಧಿಯಲ್ಲಿ ಮನಶ್ಯಾಸ್ತ್ರದ ಪ್ರಯೋಗಶಾಲೆಯೊಂದನ್ನು ವ್ಯವಸ್ಥೆಗೊಳಿಸಿದ. ಮುಂದೆ ಅಮೆರಿಕಾಕ್ಕೆ ಬಂದು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ನಾರ್ತ್‍ಕೆರೋಲಿನಾದ ಡ್ಯೂಕ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕನಾದ. ಮನಶ್ಯಾಸ್ತ್ರದ ಪ್ರವರ್ತಕರಲ್ಲಿ ಒಬ್ಬನಾದ ಸ್ಟೌಟ್‍ನ ಸಂಪ್ರದಾಯ ಈತನಲ್ಲಿ ಪರಾಕಾಷ್ಠೆ ಮುಟ್ಟಿತೆಂದು ಹೇಳುತ್ತಾರೆ. ವಿಲಿಯಮ್ ಜೇಮ್ಸ್‍ನ ಪ್ರಭಾವವೂ ಈತನ ಮೇಲೆ ತುಂಬ ಬಿದ್ದಿತ್ತು. ದೈಹಿಕ ಮನಶ್ಯಾಸ್ತ್ರ (1905); ಮನಸ್ಸು ಮತ್ತು ದೇಹ (1911); ವಿಕಾರಮನಶ್ಯಾಸ್ತ್ರ (1926); ಸಾಮಾಜಿಕಮನಶ್ಯಾಸ್ತ್ರ (1908); ಮನಶ್ಯಾಸ್ತ್ರದ ರೂಪುರೇಷೆಗಳು (1923)-ಇವು ಈತನ ಪ್ರಸಿದ್ಧ ಗ್ರಂಥಗಳು. ವರ್ತನೆಯ ಹಿನ್ನಲೆಯಲ್ಲಿ ಮಾನಸಿಕ ದೈಹಿಕ ಪ್ರವೃತ್ತಿಗಳು ಇವೆಯೆಂದು ಹೇಳಿ, ಈ ಪ್ರವೃತ್ತಿಗಳ ಸ್ವರೂಪವನ್ನೂ ಲಕ್ಷಣಗಳನ್ನೂ ನಿರ್ದೇಶಿಸಿ ಉದ್ದಿಷ್ಟವರ್ತನಾ ವಾದವನ್ನು ವ್ಯವಸ್ಥೆಮಾಡಿದ. ಡ್ಯೂಕ್ ವಿಶ್ವಿವಿದ್ಯಾಲಯಕ್ಕೆ ಬಂದ ಅನಂತರ ಅತೀಂದ್ರಿಯ ಪ್ರತ್ಯಕ್ಷ ಚೇತನವಾದ ಮುಂತಾದ ವಿವರಗಳಲ್ಲಿ ಆಸಕ್ತಿ ತಳೆದ. ಈತನ ಮನೋಧರ್ಮ ಪ್ರಮುಖವಾಗಿ ಪ್ರಾಯೋಗಿಕವಾಗಿದ್ದು. ಆದರೂ ಸಮೀಕ್ಷೆ, ಅಂತಃಸಮೀಕ್ಷೆ ಮುಂತಾದ ಸಂವಿಧಾನಗಳ ಅಗತ್ಯವನ್ನು ಬೆಳೆಯಲು ಈತನ ಸಂಶೋಧನೆಗಳು ತುಂಬ ನೆರವಾಗಿವೆ. ಈತನ ಗ್ರಂಥಗಳು ಜನಪ್ರಿಯಗೊಂಡು ಸಾಮಾನ್ಯ ಜನರಲ್ಲೂ ಮನಶ್ಯಾಸ್ತ್ರದ ವಿಚಾರವಾಗಿ ಆಸಕ್ತಿ ಮೂಡಿಸಿವೆ.															
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ